1ಯೆಹೋವ ದೇವರು ಆಳಿಕೆ ಮಾಡುತ್ತಾರೆ; ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋಷಪಡಲಿ.
2ಮೇಘಗಳೂ, ಕಾರ್ಗತ್ತಲೂ ಅವರ ಸುತ್ತಲು ಇವೆ; ನೀತಿಯೂ, ನ್ಯಾಯವೂ ಅವರ ಸಿಂಹಾಸನದ ಅಸ್ತಿವಾರವಾಗಿದೆ.
3ಬೆಂಕಿಯು ಅವರ ಮುಂದೆ ಹೋಗಿ ಅವರ ವೈರಿಗಳನ್ನು ಸುತ್ತಲೂ ದಹಿಸುವುದು.
4ಅವರ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ; ಭೂಮಿಯು ಕಂಡು ನಡುಗುತ್ತದೆ.
5ಯೆಹೋವ ದೇವರ ಸನ್ನಿಧಿಯಲ್ಲಿ ಬೆಟ್ಟಗಳು ಕರಗುತ್ತವೆ, ಸಮಸ್ತ ಭೂಮಿಯು ಮೇಣದ ಹಾಗೆ ಕರಗುತ್ತವೆ.
6ಆಕಾಶವು ಅವರ ನೀತಿಯನ್ನು ತಿಳಿಸುತ್ತದೆ; ಎಲ್ಲಾ ಜನಗಳು ಅವರ ಮಹಿಮೆಯನ್ನು ಕಾಣುತ್ತಾರೆ.
7ವಿಗ್ರಹಗಳನ್ನು ಪೂಜಿಸಿ, ವಿಗ್ರಹಗಳಲ್ಲಿ ಹೆಮ್ಮೆ ಪಡುವವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಯೆಹೋವ ದೇವರನ್ನು ಆರಾಧಿಸಿರಿ!
8ಯೆಹೋವ ದೇವರೇ, ನಿಮ್ಮ ನ್ಯಾಯಗಳನ್ನು ಚೀಯೋನ್ ಪಟ್ಟಣವು ಕೇಳಿ ಸಂತೋಷಿಸಿತು; ಯೆಹೂದದ ಪುತ್ರಿಯರು ಸಹ ಉಲ್ಲಾಸಿಸುತ್ತಾರೆ.
9ಏಕೆಂದರೆ ಯೆಹೋವ ದೇವರೇ, ನೀವು ಸಮಸ್ತ ಭೂಮಿಯ ಮೇಲೆ ಮಹೋನ್ನತರಾಗಿದ್ದೀರಿ; ಎಲ್ಲಾ ದೇವರುಗಳ ಮೇಲೆ ನೀವು ಅತ್ಯಂತ ಮಹೋನ್ನತರಾಗಿದ್ದೀರಿ.
10ಯೆಹೋವ ದೇವರನ್ನು ಪ್ರೀತಿಸುವವರು ಕೆಟ್ಟದ್ದನ್ನು ಹಗೆ ಮಾಡುವರು; ದೇವರು ತಮ್ಮ ಭಕ್ತರ ಪ್ರಾಣಗಳನ್ನು ಕಾಪಾಡಿ, ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವರು.
11ನೀತಿವಂತನಿಗೋಸ್ಕರ ಬೆಳಕೂ, ಯಥಾರ್ಥ ಹೃದಯದವರಿಗೋಸ್ಕರ ಅವರ ಹೃದಯದಲ್ಲಿ ಆನಂದವೂ ಇರುವುದು.
12ನೀತಿವಂತರೇ, ಯೆಹೋವ ದೇವರಲ್ಲಿ ಸಂತೋಷಿಸಿರಿ; ದೇವರ ಪರಿಶುದ್ಧ ನಾಮವನ್ನು ಕೊಂಡಾಡಿರಿ.